CoolCoder44's picture
Upload folder using huggingface_hub
b0c2634 verified
raw
history blame
18.7 kB
ಸುಮಾರು ಐವತ್ತರ ಆಸುಪಾಸಿನ ವಯಸ್ಸಿನ ವ್ಯಕ್ತಿ ಆತ. ಹೆಸರು ವೀರಣ್ಣ ಅಂತ. ಹೆಚ್ಚು ಮಾತನಾಡದ, ತೆಳ್ಳನೆ ಆಕೃತಿ. ಮನೆಯಲ್ಲಿ ಹೆಂಡತಿ, ಮಕ್ಕಳು ಅಳಿಯ, ಚಿಳ್ಳೆ ಪಿಳ್ಳೆಗಳು. ಮನೆಯಲ್ಲಿ ಆಡು ಭಾಷೆ ತೆಲುಗು. ಬಂದವರೊಂದಿಗೆ ತೆಲುಗು, ಕನ್ನಡ, ಹಿಂದಿ ಮಾತನಾಡುವುದು ಸರಾಗ. ದೊಡ್ಡ ಮಗಳ ಹೆಸರು ಅರುಣಾ ಅಂತ. ಅಳಿಯ ಸೀನ. ಅವನು ಆಂಧ್ರದ ಯಾವುದೋ ಊರಲ್ಲಿ ಫೈನಾನ್ಸ್ ಮಾಡುತ್ತಿದ್ದನಂತೆ. ಅದು ಬಿಟ್ಟು ಮದುವೆ ನಂತರ ಇಲ್ಲೇ ಬಳ್ಳಾರಿಯಲ್ಲಿ ಮಾವನ ಮನೆಯಲ್ಲಿ ಬಂದು ನೆಲೆಸಿದ್ದ. ದುರುಗಮ್ಮ ಗುಡಿ ಹತ್ತಿರದ ಈರಣ್ಣ ಮೆಸ್ ಅಂದ್ರೆ ಸಾಕು ಅಷ್ಟು ಪರಿಚಿತ. ಅವರು ಮೆಸ್ ಒಂದನ್ನು ನಡೆಸುತ್ತಿದ್ದರು. ಪಕ್ಕಾ ಅಂದ್ರ ಶೈಲಿಯ ಊಟ. ಸುತ್ತ ಮುತ್ತಲಿದ್ದ ಎಂ. ಬಿ. ಎ. ಇಂಜನೀಯರಿಂಗ್, ಡಿಗ್ರಿ, ಓದುವ ಹುಡುಗರು, ಬ್ಯಾಚುಲರ್ ನೌಕರರು, ಖಾಸಗಿ, ಫೈನಾನ್ಸ್ ಕಂಪನಿ ನೌಕರರು, ವಕೀಲರು, ಎಲ್ಲರೂ ಅಲ್ಲಿ ಮಧ್ಯಾಹ್ನ, ರಾತ್ರಿ ಊಟಕ್ಕೆ ಬರುತ್ತಿದ್ದರು. ಪಕ್ಕದಲ್ಲೇ ಗೋಪಿ ಬ್ಲಡ್ ಬ್ಯಾಂಕ್ ಇತ್ತು. ಅದರ ಮಾಲೀಕ ರೆಡ್ಡಿ ಭರ್ತಿ ಕುಡುಕ. ಆನಂತರ ಕುಡಿತ ಬಿಟ್ಟನೆಂದು ಕೇಳಿದ್ದೆ. ಈಗ ಇದ್ದಾನೋ ಇಲ್ಲವೋ ಗೊತ್ತಿಲ್ಲ.
ತೊಂಬತ್ತೇಳು ತೊಂಬತ್ತೆಂಟರ ಸಮಯದಲ್ಲಿ ನಾವಿನ್ನು ಹೊಸದಾಗಿ ನೌಕರಿಗೆ ಸೇರಿದ್ದವು. ಒಂದೇ ಆವರಣ ದಲ್ಲಿ ಇದ್ದಿದ್ದರಿಂದ ಸುಮಾರು ಸಮಾ ವಯಸ್ಸಿನ ಹುಡುಗ ಬುದ್ಧಿಯ ನೌಕರರು ಒಟ್ಟೊಟ್ಟಿಗೆ ಪರಿಚಯವಾಗಿ ಅಲ್ಲಿಲ್ಲಿ ತಿಂದು ಹೊಟ್ಟೆ ಕೆಡಿಸಿಕೊಂಡಿದ್ದೂ ಅಲ್ಲದೇ ಆಸ್ಪತ್ರೆಗೆ ದೇಣಿಗೆ ನೀಡಿ ಕೊಡುಗೈ ದಾನಿಗಳೂ ಆಗಿದ್ದೆವು. ಅಂತ ಸಮಯದಲ್ಲೇ ನಮಗೆ ದರ್ಶನವಾಗಿದ್ದು, ಈರಣ್ಣ ಮೆಸ್. ಸುಮಾರು ನೂರರಿಂದ ನೂರೈವತ್ತು ಜನ ಒಂದೊಪ್ಪೊತ್ತಿಗೆ ಊಟ ಮಾಡಲು ಬರುತ್ತಿದ್ದರು. ಆಹಾ… ಎಂಥೆಂಥ ಮಜದ ಓದುವ ಹುಡುಗರು ಬರುತ್ತಿದ್ದ ರೆಂದರೆ, ಬಹಳಷ್ಟು ಮಂದಿ ಆಂಧ್ರ ಸೀಮದ ಹುಡುಗರೇ ಆದ್ದರಿಂದ ಅವರಿಗೆ ಕನ್ನಡ ಹೊಸದು. ಕಲಿಯುವ ಹುಕಿ. ನಮಗೋ ತೆಲುಗು ಹೊಸದು ಕಲಿಯಲಾರದ ಹಠ. ಬರುಬರುತ್ತಾ ಆ ಹುಡುಗರಿಗೆ ಕನ್ನಡ, ನಮಗೆ ತೆಲುಗು ಅಭ್ಯಾಸವಾಗಿಬಿಟ್ಟಿತು.
ಕೇವಲ ಹತ್ತರಿಂದ ಹದಿನೈದು ಜನರ ಪರಿಚಯದ ನಾವು ಆ ಮೆಸ್ ಸೇರಿದ ಮೇಲೆ ಸುಮಾರು ಇಲಾಖೆ ಗಳ ನೌಕರರು ಗೆಳೆಯರಾದರು. ಸಖತ್ ಕಾಮಿಡಿ ಸೆನ್ಸ್ ಇದ್ದ ನಮ್ಮ ಇನ್ನೊಬ್ಬ ಗೆಳೆಯನಿದ್ದ. ಅವನ ಹೆಸರೂ ಸೀನ. ಅವನ ಕನ್ನಡ ಭಾಷೆ ಸ್ಪುಟವಾಗಿತ್ತು. ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯಾದರೂ ಹರಕಾ ಪರಕಾ ಮಾತಾಡಿ ತಮಾಷೆ ಮಾಡಿ ಸೀನ್ ಕ್ರಿಯೇಟ್ ಮಾಡಿಬಿಡುತ್ತಿದ್ದ. ಅವನೊಟ್ಟಿಗೆ ನಾನು ಕಾಡು ರಾಜ (ಅವನು ಅರಣ್ಯ ಇಲಾಖೆಯಲ್ಲಿದ್ದಿದ್ದರಿಂದ ಹಾಗೆ ಕರೆಯುತ್ತಿದ್ದೆವು ) ಆ ಸಮಯಕ್ಕೆ ಏನು ತೋಚುತ್ತೋ ಅದನ್ನು ಸ್ವಾರಸ್ಯವಾಗಿ, ಕಾಲೆಳೆಯುವಂತೆಯೂ, ನಕ್ಕು ಹಗುರಾಗುವಂತೆಯೂ ಮಾತಾಡಿ ಗಮನ ಸೆಳೆಯುತ್ತಿದ್ದೆವು. ಹೀಗಾಗಿ ನಮ್ಮ ಗುಂಪು ಈರಣ್ಣ ಮೆಸ್ ನಲ್ಲಿ ಬಂತೆಂದರೆ ಹುಡುಗರು ಜೊತೆ ಸೇರಿ ಹರಟೆಗೆ ಕುಂತುಬಿಡುತ್ತಿದ್ದರು. ಚಿರಂಜೀವಿ, ಬಾಲಕೃಷ್ಣ ಅವರ ಸಿನೆಮಾಗಳ ಕ್ರೇಜ್ ಎಷ್ಟಿತ್ತೆಂದರೆ ಆಗ ರಿಲೀಜ್ ಆಗುತ್ತಿದ್ದ ಅವರ ಸಿನೆಮಾಗಳ ಷೋ ನಂತರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ, ಮೆರವಣಿಗೆ, ಕೇಕೆ. ಮಧ್ಯರಾತ್ರಿ ನಂತರ ಒಂದು ಗಂಟೆಗೆ ಮೊದಲ ಷೋ. ಅದಕ್ಕಾಗಿ ಹಿಂದಿನ ದಿನ ರಾತ್ರಿ ಎಂಟು ಗಂಟೆಗೇ ಟಿಕೆಟ್ಟಿಗೆ ಕ್ಯೂ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಗುಂಪುಗಳ ನಡುವೆ ಮಾರಾಮಾರಿ. ಒಹ್…. ಬ್ಯಾಡಪ್ಪ ಅಂತವರ ಉರವಣಿಗೆ. "ಸರಿಯಾಗಿ ಓದಿ ಪಾಸಾಗಿ ದುಡ್ಕಂಡು ತಿನ್ರಲೇ ಅಂದ್ರೆ ಅತಿರೇಕದ ಸಿನಿಮಾದ ಹುಚ್ಚು ಹಚ್ಕೊಂಡು ತಿರುಗ್ತವೆ ಮುಂಡೇವು" ಹಳೇ ತಲೆಮಾರಿನ ದುಡಿದು ಸಾಕುತ್ತಿರುವ ಪೋಷಕರು ಹೀಗೇ ಪೇಚಾಡುತ್ತಿದ್ದರು. ಸಾವ್ರ ಸಲ ಬಡ್ಕೊಂದ್ರೂ ಮನೆಗೆ ಒಂದು ಕೆಜಿ ಅಕ್ಕಿ ತಂದು ಕೊಡದ ಕೆಲ ಅಡ್ನಾಡಿಗಳು ಈ ಸಿನೆಮಾಗಳ ಹುಚ್ಚಲ್ಲಿ ಅನ್ನ ಸಂತರ್ಪಣೆಯಲ್ಲಿ ಹಣೆಗೆ ರಿಬ್ಬನ್ನು ಕಟ್ಟಿಕೊಂಡು ಸೇವೆ ಮಾಡುವ ಪರಿಯನ್ನು ಕಂಡು ಗೊಣಗಿದ್ದೂ ಆಯಿತು.
ನಮ್ಮ ಗುಂಪಿನ ಸದಸ್ಯರು ಈರಣ್ಣ ಕುಟುಂಬದ ಸದಸ್ಯರೊಂದಿಗೆ ಎಷ್ಟು ಹತ್ತಿರಾದರೆಂದರೆ, ರಶ್ ಇದ್ದರೆ ಸೀದಾ ತಟ್ಟೆ ಹಿಡಿದು ಅಡುಗೆ ಮನೆಗೆ ನುಗ್ಗಿ ಚಪಾತಿ ಉದ್ದಿದ್ದರೆ ಅವುಗಳನನ್ನು ಓಲೆ ಮೇಲೆ ನಾವೇ ಬೇಯಿಸಿ ಕೊಂಡು, ಪಾತ್ರೆಗಳನ್ನು ತಡಕಾಡಿ ಪಲ್ಯ, ಅನ್ನ ಪಪ್ಪು ( ಗಟ್ಟಿ ಬೇಳೆ ಮತ್ತು ಸೊಪ್ಪಿನ ಸಾರಿಗೆ ಹಾಗನ್ನು ತ್ತಾರೆ). ನೀಡಿಕೊಂಡು ಅಲ್ಲೇ ಮೂಲೆಯಲ್ಲೇ ಕುಂತು ಹೊಟ್ಟೆ ತುಂಬಾ ತಿಂದು ಎದ್ದು ಬರುತ್ತಿದ್ದೆವು. "ಇಷ್ಟು ಮಾಡೋ ನೀವು ರೂಮಿನಲ್ಲೇ ಮಾಡ್ಕೊಂಡು ತಿನ್ನೋಕೇನು ಧಾಡಿ? " ಎಂದು ಯಾರಾದರು ಕೇಳಿದರೆ "ನೋಡಿ, ಮಾಡ್ಕೊಂಡು ತಿನ್ನೋಕೇನೂ ಬೇಜಾರಿಲ್ಲ, ಆದ್ರೆ ತಿಂದ್ ಮೇಲೆ ಮುಸುರಿ ತಿಕ್ಕಿ ತೊಳೆಯೋದಿದೆ ಯೆಲ್ಲಾ? ಆಗ ಬರುತ್ತೆ (ಕುತ್ತಿಗೆಗೆ ) ಕುತಿಗ್ಗೆ" ಅಂದು ಜಾರಿಕೊಳ್ಳುತ್ತಿದ್ದೆವು. "ಮದುವೆನಾದ್ರೂ ಮಾಡ್ಕೊಂಡ್ರೆ ಬಂದ್ ಹೆಂಡ್ರು ಕೂಳು ಕುಚ್ಚಿ ಬಡಿತಾರೆ, ಆದಷ್ಟು ಬೇಗ ಆಗ್ರಪ್ಪ" ಅಂತ ಈರಣ್ಣನ ಪತ್ನಿ ಹೇಳಿದರೆ ಒಬ್ಬೊಬ್ರು ಒಂದೊಂದ್ ಹುಡುಗಿ ವರಸೆ, ಕಥೆ ಕಂತು ಕಂತಾಗಿ ಪೋಣಿಸಿ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದೆವು.
ಹೊಟ್ಟೆ ತುಂಬಾ ಒಂದೊತ್ತಿನ ಊಟ ಕೊಡುತ್ತಿದ್ದ ಈರಣ್ಣ, ಆ ಊಟಕ್ಕೆ ತಗೋತಾ ಇದ್ದಿದ್ದು ಬರೀ ಹತ್ತು ರುಪಾಯಿ. ಬರೋರೆಲ್ಲಾ ಸ್ಟೂಡೆಂಟ್ಸ್, ಮತ್ತು ಎಂಪ್ಲಾಯೀಸ್ ಆದ್ದರಿಂದ ಅವರಿಂದ ತಿಂಗಳಿನ ಲೆಕ್ಕದಲ್ಲಿ ಕೊನೆಗೆ ದುಡ್ಡು ಪಡೀತಿದ್ದ. ದುಡ್ಡು ಕೈಯಾಡುವವರು ಮುಂಚಿತವಾಗಿಯೇ ಕೊಟ್ಟು ಬಿಡೋರು. ನಾವು ದಿನದ ಲೆಕ್ಕದಲ್ಲಿ, ವಾರದ ಲೆಕ್ಕದಲ್ಲಿ ಕೊಡುತ್ತಿದ್ದೆವು. ಆದರೆ, ಈರಣ್ಣನಾಗಲೀ ಆತನ ಮಗಳು ಅರುಣಾ, ಅಳಿಯ ಸೀನನಾಗಲೀ ದುಡ್ಡಿನ ಕೊಡುಕೊಳ್ಳುವ ವ್ಯವಹಾರದಲ್ಲಿ ಒಂದು ಶಿಸ್ತು, ಲೆಕ್ಕ ಮುಲಾಜು ಇದ್ದಿದ್ದರೆ ಮೆಸ್ ಚೆನ್ನಾಗಿಯೇ ನಡೆಯುತ್ತಿತ್ತು. ಅದನ್ನವರು ಪಾಲಿಸಲೇ ಇಲ್ಲ. ಮೊದಮೊದಲು ಚೆನ್ನಾಗಿಯೇ ಇರುತ್ತಿದ್ದ ಹುಡುಗರು ಬರುಬರುತ್ತಾ ಬರೋಬ್ಬರಿ ತಿಂದುಂಡು ದುಡ್ಡು ಕೊಡಲು ಸತಾಯಿಸುವುದು, ಕೊಡದೇ ಮೆಸ್ ಕಡೆ ತಲೆ ಹಾಕದಿರುವುದು ಮಾಡಲು ಶುರು ಮಾಡಿದರು. ಆದರೂ ಹಾಗೂ ಹೇಗೂ ನಡೆಯುತ್ತಿತ್ತು ಮೆಸ್. ದಿನಾ ರಾತ್ರಿ ಎಲ್ರೂ ಊಟ ಮಾಡಿ ಹೋದ ಮೇಲೆ ಮನೆಯವರೆಲ್ಲಾ ಉಂಡು ತಟಗು ಮನೆಯಲ್ಲಿ ಮಲಗುವ ಹೊತ್ತಿಗೆ ಹನ್ನೊಂದುವರೆ ಹನ್ನೆರಡಾಗುತ್ತಿತ್ತು.
ಈ ಮಧ್ಯೆ ಅರುಣಾಗೆ ಆಗಲೇ ನಾಲ್ಕು ವರ್ಷದ ಒಂದು ಗಂಡು ಮಗುವಿತ್ತು. ನೋಡಲು ಸಣ್ಣಗಿದ್ದ ಅರುಣಾ ಥೇಟ್ ಶಿಲುಬೆಯಂತೆ ಕಾಣುತ್ತಿದ್ದಳು. ನಾವು ನಾಲ್ಕು ಜನ ಗೆಳೆಯರು ಸೇರಿ "ನಿಮ್ಮಪ್ಪ, ತಂದ್ ಹಾಕ್ತಾರೆ, ಅವ್ವ ಮಾಡ್ ಹಾಕ್ತಾರೆ, ಸೀನ (ಗಂಡ ) ಹೊರಗಿನ ತಿರುಗಾಡೋ ಕೆಲ್ಸ ನೋಡ್ಕೋತಾನೆ, ಅಬ್ಬಬ್ಬಾ ಅಂದ್ರೆ ಬಡಿಸೋದು ನಿನ್ ಕೆಲ್ಸ, ಮುಸಿರೇನೂ ಬೇರೆಯವ್ರು ಬಂದ್ ತಿಕ್ಕಿ ಹಾಕ್ತಾರೆ, ಅಷ್ಟು ಮಾಡ್ತಾ ಚೆನ್ನಾಗಿ ತಿಂದುಂಡು ಆರೋಗ್ಯ ನೋಡ್ಕೊಳ್ಳೋಕೆ ಅದೆಷ್ಟು ಸೋಮಾರಿತನ ನಿಂಗೆ ?" ಉಗಿಯುತ್ತಿದ್ದೆವು. ಅರುಣಾ ಬಹಳ ನಿಸ್ಸಂಕೋಚವಾಗಿ ಮಾತಾಡುತ್ತಿದ್ದಳು. ಆದರೆ ಅವಳಿಗೆ ಆರೋಗ್ಯದ ಕಡೆ ಲಕ್ಷ್ಯ ಇದ್ದಿಲ್ಲ. ಅಂಥಾದ್ದ ರಲ್ಲಿ ಅರುಣಾ ಮತ್ತೊಮ್ಮೆ ಬಸಿರೆಂದು ತಿಳಿಯಿತು. "ಅಷ್ಟೊಂದು ವೀಕ್ ಇರುವ ಅರುಣಾಳ ಸ್ಥಿತಿಯಲ್ಲಿ ಇನ್ನೊಂದು ಡೆಲಿವರಿ ಎಷ್ಟರ ಮಟ್ಟಿಗೆ ಸೇಫ್ ಅಂತ ಯೋಚಿಸ್ತೀಯಾ?" ಆಕೆಯ ಗಂಡ ಸೀನನನ್ನು ಸೈಡಿಗೆ ಕರೆದು ಕ್ಯಾಕರಿಸಿದೆವು. ಅದೊಂದಿನ ನನ್ನ ಗೆಳೆಯ ಸೀನ, ಕಾಡು ರಾಜ ಮತ್ತು ನಾನು ರಾತ್ರಿ ಕನ್ನಡ ಸಿನೆಮಾ "ಲಾಲಿ" ನೋಡಿಕೊಂಡು ಲೇಟಾಗಿ ಮೆಸ್ ಗೆ ಊಟಕ್ಕೆ ಬಂದೆವು. ಅದೇತಾನೇ ಅರುಣಾಳನ್ನು ಆಸ್ಪತ್ರೆಯಿಂದ ಚೆಕಪ್ ಮಾಡಿಸ್ಕೊಂಡು ಬಂದ ಆಕೆ, ಗಂಡ ಸೀನ ಒಳ್ಳೆ ಖುಷಿಯಲ್ಲಿದ್ದರು. "ಹೊಟ್ಟೆಯಲ್ಲಿ ಮಗು ಆರೋಗ್ಯವಾಗಿದೆಯಂತೆ" ಅರುಣಾ ಅವರಮ್ಮನಿಗೆ ಹೇಳುತ್ತಿದ್ದಳು.
ಎಂದಿನಂತೆ ನಾವು ಅಡುಗೆ ಮನೆಗೇ ನುಗ್ಗಿ ಇದ್ದದ್ದು ತಟ್ಟೆಗೆ ನೀಡಿಕೊಂಡು ಊಟ ಮಾಡ್ತಾ ಇದ್ದೆವು. ಏಕಾಏಕಿ ನಮ್ಮ ಗೆಳೆಯ ಸೀನ ಅರುಣಾ ಮತ್ತು ಆಕೆಯ ಗಂಡ ಸೀನನ ಎದುರಲ್ಲೇ " ಅಲ್ಲಾ ಅರುಣಾ, ದಿನಾ ರಾತ್ರಿ ಎಲ್ಲಾ ಕೆಲ್ಸ ಮುಗ್ಸಿ ಮಲಗೋದೇ ರಾತ್ರಿ ಹನ್ನೆರಡಾಗುತ್ತೆ ಅಂತೀರಾ, ಬೆಳಿಗ್ಗೆ ಬೇಗ ಏಳಬೇಕು, ಮತ್ತೆ ಕೆಲ್ಸ ಮಗ, ಅವನ ದೇಖರಿಕೆ, ಎಲ್ಲಾ ಸರಿ; ಮೂಡ್ ಬಂದ್ರೆ ನಿಮ್ಮಿಬ್ರಲ್ಲಿ ಯಾರು ಎಷ್ಟು ಹೊತ್ಗೆ ಮೊದ್ಲು ಎಬ್ಬಿಸು ತ್ತಿದ್ದಿರಿ?" ಅಂದುಬಿಟ್ಟ. ಒಂದೆರಡು ಕ್ಷಣ ನಾನು, ಕಾಡು ರಾಜ ಮುಖ ನೋಡಿಕೊಂಡೆವು. ಅರುಣಾ ಅಷ್ಟೇ ಸಲೀಸಾಗಿ ಗಂಡನ ಪಕ್ಕಕ್ಕೆ ಸರಿದು "ಒಂದೊಂದ್ ಸಲ ನಾನು ಮತ್ತೊಂದ್ ಸಲ ಇವ್ರು" ಅಂದಾಗ ಆಕೆಯ ಗಂಡ ಸೀನ, ಆಕೆಯ ಅಮ್ಮ ನಾವು ನಕ್ಕಿದ್ದೇ ನಕ್ಕಿದ್ದು. ಎರಡನೆಯದು ಹೆಣ್ಣಾಯಿತು ಅರುಣಾಗೆ.
ಅದೇ ಟೈಮ್ನಲ್ಲಿ ಅಪ್ಪ ಹೃದಯಾಘಾತದಿಂದ ಹೋಗಿಬಿಟ್ಟ. ನಾನು ಅಜ್ಜಿ, ಅವ್ವನನ್ನು ಕರೆದುಕೊಂಡು ಬಂದು ಬಳ್ಳಾರಿಯಲ್ಲಿ ಮನೆ ಮಾಡಿದೆ. ಮೆಸ್ ಗೆ ಹೋಗುವುದು ಕಡಿಮೆಯಾಯಿತು. ಬಾಡಿಗೆ ಮನೆಗಳ ಬದುಕು ನಮ್ಮನ್ನು ಅಲೆಮಾರಿಗಳಂತೆ ನೋಡಿತು. ನೌಕರಿಯ ಜೋಳಿಗೆ ಹಿಡಿದು ಊರೂರು ತಿರುಗಿ ದೇಹಿ ಅನ್ನುತ್ತಾ ಹತ್ತಾರು ವರ್ಷಗಳೇ ಕಳೆದವು. ಗೆಳೆಯ ಸೀನ ಕಪಲ್ ಕೇಸ್ ನಲ್ಲಿ ತನ್ನೂರು ಚಳ್ಳಕೆರೆಗೆ ವರ್ಗಾಯಿಸಿ ಕೊಂಡ. ಕಾಡು ರಾಜ ಇನ್ನು ಬಳ್ಳಾರಿಯಲ್ಲೇ ಇದ್ದಾನೆ. ನಾನೀಗ ಕೊಪ್ಪಳದಲ್ಲಿ. ಮೊನ್ನೆ ನನ್ನ ಹಿರಿಯ ಸಿಬ್ಬಂದಿ, ಗೈಡ್, ತನ್ನ ಮನೆ ಬಾಡಿಗೆ ನೀಡಿ ಸಹಕರಿಸಿದ್ದ ಸಹೃದಯಿಯೊಬ್ಬರು ಬಳ್ಳಾರಿಯಲ್ಲಿ ಆಕಸ್ಮಿಕವಾಗಿ ಬೈಕ್ ಮೇಲೆ ಬಿದ್ದು ಆಸ್ಪತ್ರೆ ಸೇರಿದಾಗ ನೋಡಲು ಹೋಗಿದ್ದೆ. ವೈದ್ಯರ ಕ್ಲಿನಿಕ್ ಅದೇ ದುರುಗಮ್ಮ ಗುಡಿ ಹತ್ತಿರದ ಈರಣ್ಣ ಮೆಸ್ ಪಕ್ಕದ ರಸ್ತೆಯಲ್ಲಿತ್ತು. ಸುಮ್ಮನೆ ನೆನಪಾಗಿ ಮನೆ ಹತ್ತಿರ ಹೋದೆ. ಒಂದು ಹುಡುಗಿ ಕಕ್ಕ ಮಾಡಿಕೊಂಡ ಚಿಕ್ಕ ಮಗುವನ್ನು ತೊಳೆಯುತ್ತಿದ್ದಳು. ಆಕೆ ಅರುಣಾಳ ತಂಗಿ.
"ಎಲ್ಲಿ ಅರುಣಮ್ಮ? ಹೇಗಿದಿರಿ? ನಾನ್ ಗುರ್ತು ಸಿಕ್ಕೆನೇ? ಸೀನ ಏನ್ ಮಾಡ್ತಾ ಇದ್ದಾನೆ? ಕೇಳುತ್ತಲೇ ಇದ್ದೆ. ಆ ಹುಡುಗಿ ಏನು ಆಗಿಯೇ ಇಲ್ಲವೆಂಬಂತೆ ಅಥವಾ ಆಗಿದ್ದನ್ನು ಮರೆತು ನೆನಪಿಸಿಕೊಂಡಂತೆ "ಸೀನ ಆಂಧ್ರಕ್ಕೆ ಹೋದ, ಅರುಣಾ ಕೂಡ "ಹೋಗಿ" ನಾಲ್ಕು ವರ್ಷವಾದವು, ಆಕೆ ಮಕ್ಕಳನ್ನ ನಾವೇ ಜೋಪಾನ ಮಾಡ್ತಿ ದೀವಿ. ದುಡ್ಡಿನ ಅಡಚಣೆ, ಸರಿಯಾಗಿ ಮ್ಯಾನೇಜ್ ಮಾಡದ ಕಾರಣ ಮೆಸ್ ಈಗ ನಡೆಸುತ್ತಿಲ್ಲ. ಬಹಳ ದಿನ ವಾಯ್ತಲ್ಲಾ? ಬೇಗ ನಿಮ್ ಗುರ್ತು ಸಿಗ್ಲಿಲ್ಲ" ಅಂದಳು. "ಸೀನ ಆಂಧ್ರಕ್ಕೆ ಹೋಗಿದ್ದು ಸರಿ, ಅರುಣಾ ಕೂಡ ಹೋಗಿದ್ದು ಸರಿ. ಆದ್ರೆ ಮಕ್ಕಳನ್ನು ನೀವ್ ಯಾಕ್ ಜೋಪಾನ ಮಾಡೋದು" ಅಂದೆ. ನನಗೆ ಸರಿಯಾಗಿ ಅರ್ಥವೇ ಆಗಿಲ್ಲವೆಂದು ಆ ಹುಡುಗಿಗೆ ಗೊತ್ತಾಯಿತು. ಅರುಣಾ ತೀವ್ರ ಅನಾರೋಗ್ಯವಾಗಿ ತೀರಿಕೊಂಡು ನಾಲ್ಕು ವರ್ಷಗಳೇ ಆದದ್ದನ್ನು ಬಿಡಿಸಿ ಹೇಳಿದಳು.
ಪಿಚ್ಚೆನಿಸಿ ಹೆಚ್ಚು ಹೊತ್ತು ಅಲ್ಲಿರಲಾಗದೇ ನಡೆದು ಬಂದುಬಿಟ್ಟೆ
*****